ವೆಂಕಟಕೃಷ್ಣಯ್ಯ, ಎಂ
	1844-1933. ಕರ್ನಾಟಕದ ಪ್ರಸಿದ್ಧ ಸಮಾಜಸೇವಕರು, ಸಾಹಿತಿಗಳು ಮತ್ತು ಪತ್ರಿಕೋದ್ಯಮಿ. ಮೈಸೂರು ನಗರದ ಸಾರ್ವಜನಿಕ ಜೀವನದ ಶ್ರೇಯಸ್ಸಿಗೆ ಬಹುವಾಗಿ ಶ್ರಮಿಸಿದ ಇವರು ಮೈಸೂರು ತಾತಯ್ಯ ಎಂದೇ ಪ್ರಸಿದ್ಧರು. ಹೆಗ್ಗಡದೇವನ ಕೋಟೆ ತಾಲ್ಲೂಕು ಮಗ್ಗೆ ಗ್ರಾಮದಲ್ಲಿ 1844 ಸೆಪ್ಟೆಂಬರ್ 5ರಂದು ಜನಿಸಿದರು. ಇವರ ತಂದೆ ಸುಬ್ಬಯ್ಯ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು, ಕಷ್ಟದಿಂದ ವಿದ್ಯಾಭ್ಯಾಸ ಮಾಡಿದರು. ಮೈಸೂರು ನಗರದ ರಾಜಾಸ್ಕೂಲಿನಲ್ಲಿಯೂ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿಯೂ ವ್ಯಾಸಂಗ ಮಾಡಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಡತನದ ಕಾರಣ ಹೆಚ್ಚಿನ ವ್ಯಾಸಂಗ ಸಾಧ್ಯವಾಗಲಿಲ್ಲ. ಉಪಾಧ್ಯಾಯ ವೃತ್ತಿ ಕೈಗೊಂಡು ಮೈಸೂರಿನಲ್ಲಿ ಆಗತಾನೆ ಆರಂಭವಾಗಿದ್ದ ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾದರು; ಅನಂತರ ಅಲ್ಲಿಯೇ ಮುಖ್ಯೋಪಾಧ್ಯಾಯರಾಗಿ ದೀರ್ಘಕಾಲ ಸೇವೆಸಲ್ಲಿಸಿದರು. ಉಪಾಧ್ಯಾಯ ಕೆಲಸದ ಜೊತೆಗೆ ಇವರು ಪತ್ರಿಕೋದ್ಯಮ ಮತ್ತು ಸಮಾಜ ಸೇವೆಯನ್ನೂ ಮಾಡಿದರು. ಶಾರದಾವಿಲಾಸ ವಿದ್ಯಾ ಸಂಸ್ಥೆ, ಅನಾಥಾಲಯ ಮುಂತಾದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಸಾರ್ವಜನಿಕ ಜೀವನದಲ್ಲಿ ಗಣ್ಯ ಸ್ಥಾನಗಳಿಸಿದ್ದ ಇವರು ಮೈಸೂರು ಪುರಸಭೆ ಹಾಗೂ ಪ್ರಜಾಪ್ರತಿನಿಧಿ ಸಭೆ, ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್, ನ್ಯಾಯವಿಧಾಯಕ ಸಭೆ ಮುಂತಾದ ಉನ್ನತಮಟ್ಟದ ಸಂಘಸಂಸ್ಥೆಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. 

	ಕನ್ನಡ ಪತ್ರಿಕೋದ್ಯಮ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಗಣ್ಯವಾದುದು. ವೃತ್ತಾಂತ ಚಿಂತಾಮಣಿ ಹಿತಬೋಧಿನಿ, ವಿದ್ಯಾದಾಯಿನಿ, ಸಾಧ್ವಿ, ಸಂಪದ ಭ್ಯುದಯ, ಗ್ರಾಮಜೀವನ ಮುಂತಾದ ಕನ್ನಡ ಪತ್ರಿಕೆ ಗಳನ್ನೂ ಮೈಸೂರು ಹೇರಾಲ್ಡ್ ವೆಲ್ತ್ ಆಫ್ ಮೈಸೂರು, ಮೈಸೂರು ಪೇಟ್ರಿಯಟ್, ನೇಚರ್ ಕ್ಯೂರ್ ಮುಂತಾದ ಇಂಗ್ಲಿಷ್ ಪತ್ರಿಕೆಗಳನ್ನೂ ಆರಂಭಿಸಿ ಅನೇಕ ವರ್ಷ ನಡೆಸಿದರು. ರಾಜ್ಯಶಾಸ್ತ್ರ, ಸಾಹಿತ್ಯ, ಸಂಸ್ಕøತಿ ಮುಂತಾದ ಬಗೆಬಗೆಯ ವಿಷಯಗಳನ್ನು ಕುರಿತ ಲೇಖನಗಳನ್ನು ಪ್ರಕಟಿಸಿ ಜನತೆಯಲ್ಲಿ ಉದಾತ್ತ ಭಾವನೆ ಮತ್ತು ವಿಚಾರ ಸ್ವಾತಂತ್ರ್ಯ ಬೆಳೆಸಲು ಪ್ರಯತ್ನಿಸಿದರು. ಭಾರತ ಸ್ವಾತಂತ್ರ್ಯ ಚಳವಳಿಯನ್ನು ಈ ಪತ್ರಿಕೆಗಳ ಮೂಲಕ ಪ್ರೋತ್ಸಾಹಿಸಿದರು. ಈ ಕಾರಣಕ್ಕಾಗಿ ಬ್ರಿಟಿಷ್ ಸರ್ಕಾರ ಇವರ ಪತ್ರಿಕೆಗಳನ್ನು ಹಲವು ಬಾರಿ ಪ್ರತಿಬಂಧಿಸಿತ್ತು. ಮಾರ್ಗದರ್ಶಕ ಪಿ.ಆರ್.ರಾಮಯ್ಯ ಅಗರಂ ರಂಗಯ್ಯ ಮೊದಲಾದವರಿಗೆ ಗುರುಸ್ಥಾನದಲ್ಲಿದ್ದಾರೆ. 

	ಇವರು ಸಲ್ಲಿಸಿದ ಸಾಹಿತ್ಯ ಸೇವೆಯೂ ಗಣ್ಯವಾದುದು. ವಿದ್ಯಾರ್ಥಿ ಕರಭೂಷಣ, ಧನಾರ್ಜನೆಯ ಕ್ರಮ, ಚೋರಗ್ರಹಣತಂತ್ರ, ಅರ್ಥಸಾಧನ, ಆರೋಗ್ಯ ಸಾಧನ ಪ್ರಕಾಶಿಕೆ ಮುಂತಾದವು ಇವರ ಕೃತಿಗಳು. ಇವರ ಸಾಹಿತ್ಯ ಸೇವೆಯನ್ನು ಮನ್ನಿಸಿ ಕನ್ನಡ ಜನತೆ ಇವರನ್ನು ದಾವಣಗೆರೆಯಲ್ಲಿ ನಡೆದ 8ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಿತು(1922). ಇವರು 1933 ನವೆಂಬರ್ 8ರಂದು ಮೈಸೂರಿನಲ್ಲಿ ನಿಧನರಾದರು. ಇವರ ಜ್ಞಾಪಕಾರ್ಥ ಇವರ ಪ್ರತಿಮೆಯನ್ನು ಮೈಸೂರು ನಗರ ಬಸ್‍ನಿಲ್ದಾಣದ ಬಳಿಯ ಉದ್ಯಾನವನದಲ್ಲಿ ಸ್ಥಾಪಿಸಲಾಗಿದೆ.				
		(ಎ.ಆರ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ